ಕ್ರಟ್ಜರ್ ಮಾಕ್ಸ್
1854-1941. ಜರ್ಮನ್ ಕಾದಂಬರಿಕಾರ ಹಾಗೂ ಶ್ರಮಜೀವಿಗಳ ಪ್ರತಿನಿಧಿ. ಪೋಸೆನ್ ನಗರದಲ್ಲಿ ಹುಟ್ಟಿದ ಈತ ತನ್ನ 13ನೆಯ ವಯಸ್ಸಿನಲ್ಲಿ ಬರ್ಲಿನ್ ನಗರಕ್ಕೆ ವಲಸೆ ಬಂದು ಕಾರ್ಖಾನೆಗಳಲ್ಲಿ ಬೋರ್ಡು ಬರೆಯುವ ಉದ್ಯೋಗದಲ್ಲಿದ್ದ ಆಕಸ್ಮಿಕವೊಂದಕ್ಕೆ ಸಿಕ್ಕಿ ಅದರಿಂದ ಚೇತರಿಸಿಕೊಳ್ಳುತ್ತಿರುವಾಗ ಬರೆಯಲು ಆರಂಭಿಸಿ ಜನಪ್ರಿಯತೆ ಗಳಿಸಿದ. ಫ್ರೆಂಚ್ ಕಾದಂಬರಿಕಾರ ಎಮಿಲಿ ಜೋಲಾನಿಂದ ಪ್ರಭಾವಿತನಾಗಿ, ಬಡವರು ಎದುರಿಸುತ್ತಿರುವ ಆರ್ಥಿಕ, ಸಾಮಾಜಿಕ, ಸಮಸ್ಯೆಗಳನ್ನು ಸ್ವಾಭಾವಿಕ ರೀತಿಯಲ್ಲಿ ಚಿತ್ರಿಸತೊಡಗಿ ಬರ್ಲಿನ್ ಕಾದಂಬರಿ ಎಂಬ ಪಂಥವನ್ನು ಆರಂಭಿಸಿದ. ಈತ 30ಕ್ಕಿಂತ ಹೆಚ್ಚು ಕಾದಂಬರಿಗಳನ್ನೂ ಅನೇಕ ಸಣ್ಣ ಕಥೆಗಳನ್ನೂ ಬರೆದಿದ್ದಾನೆ.

ಡಿ ಬೆಟ್ರೊಗೆನೆನ್ (ಮೋಸ ಹೋದವರು 1882) ಕಾದಂಬರಿಯಲ್ಲಿ ಜೀವನೋಪಾಯಕ್ಕಾಗಿ ಗತ್ಯಂತರವಿಲ್ಲದೆ ಸೂಳೆಗಾರಿಕೆಯನ್ನು ಅವಲಂಬಿಸಿದ ಬಡ ಹೆಣ್ಣು ಮಗಳೊಬ್ಬಳ ಕಥೆ ಇದೆ. ಬಡತನದ ಬವಣೆಯನ್ನುಡಿ ವೆರ್‍ಕೊಮನೆನ್ (ನೀತಿ ಗೆಟ್ಟವರು 1883) ಕೃತಿ ವಿವರಿಸುತ್ತದೆ. ಮೈಸ್ಟರ್ ಟಿಂಪೆಯಲ್ಲಿ (ಮಾಸ್ಟರ್ ಟಿಂಪೆ 1888) ಯಂತ್ರಗಳ ಪ್ರಾಬಲ್ಯದಿಂದ ಕೆಲಸ ಕಳೆದುಕೊಂಡ ಕುಶಲ ಕೈಕೆಲಸಗಾರನ ದಾರುಣ ಚಿತ್ರಣವಿದೆ. ಗೆಸಿಹ್ಟ್ ಕ್ರಿಸ್ಟಿಯಲ್ಲಿ (ಕ್ರಿಸ್ತನ ಬರುವಿಕೆ 1897) ಬಡವರನ್ನು ಕಂಡು ಮರುಗಿದ ಕ್ರಿಸ್ತನ ವರ್ಣನೆ ಇದೆ.								(ಟಿ.ವಿ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ